ಬೈಂದೂರು: ಇಂಥ ಪರಿಸ್ಥಿತಿ ಪ್ರಾಯಃ ಯಾರಿಗೂ ಬರಲಾರದು. ಕ್ರೀಡಾ ಸಾಧನೆ ಮಾಡಿ ಸಂಭ್ರಮಿಸಬೇಕಿದ್ದ ಮಗಳ ಅಕಾಲ ಮೃತ್ಯು ಕುಟುಂಬವನ್ನು ನಿತ್ಯ ಕಣ್ಣೀರಿಡುವಂತೆ ಮಾಡಿದೆ. ಇದು ಇತ್ತೀಚೆಗೆ 'ಆತ್ಮಹತ್ಯೆ'ಗೆ ಶರಣಾದ ರಾಷ್ಟ್ರೀಯ ಕ್ರೀಡಾಪಟು ಪೃಥ್ವಿ ಅವರ ಕುಟುಂಬದ ಕರುಣಾಜನಕ ಕಥೆ.
ಪ್ರೌಢಶಾಲಾ ಹಂತದಲ್ಲೇ ಮಗಳು ಕ್ರೀಡಾತಾರೆಯಾಗಿ ಹೊರಹೊಮ್ಮುತ್ತಿದ್ದಾಳೆ, ಆಕೆಯ ಭವಿಷ್ಯವನ್ನು ಉನ್ನತವಾಗಿ ರೂಪಿಸಬೇಕು, ಅವಳು ರಾಷ್ಟ್ರಮಟ್ಟದಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವ ಅದಮ್ಯ ತುಡಿತ ಪಾಲಕರದ್ದಾಗಿತ್ತು.
ಅದಕ್ಕಾಗಿ ತಮ್ಮಲ್ಲಿ ಹಣದ ಅಡಚಣೆ ಎದುರಾದಾರೂ ದಾನಿಗಳ ನೆರವಿನಿಂದ ಮಗಳ ಭವಿಷ್ಯವನ್ನು ಉಜ್ವಲಗೊಳಿಸುವ ಯತ್ನ ಮಾಡಿದ್ದರು. ಆದರೆ ಇಂದು ಆ ಮಗಳೇ ಇಲ್ಲವಾಗಿದ್ದಾಳೆ. ಮಗಳ ಸಾವನ್ನು ಅರಗಿಸಿಕೊಳ್ಳಲಾರದ ತಾಯಿಯನ್ನು ಸಂತೈಸುವುದೇ ಕಷ್ಟವಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಂಡ ನೂರಾರು ಮಂದಿ ಇದ್ದಾರೆ. ಆದರೆ ಇಂತಹ ದುರಂತ ಕಥೆ ಮಾತ್ರ ವಿರಳ. ಇಂದಿಗೂ ಇವರ ಮನೆಗೆ ಅಂಪಾರಿನಿಂದ ಕಾಡು ರಸ್ತೆಯ ಮೂಲಕ ತೆರಳಬೇಕು.
ಕಡು ಬಡತನದಲ್ಲಿ ಹುಟ್ಟಿ ಬೆಳೆದ ಈಕೆಯದು ಕ್ರೀಡಾ ಕುಟುಂಬ. ಚಿಕ್ಕಮ್ಮ, ಸಹೋದರ ಹಾಗೂ ಸಹೋದರಿ ಸಹ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದವರು.
ಮಗಳ ಸಾವಿನ ದುಃಖದ ನಡುವೆಯೂ ತನಿಖೆಯ ನಿಟ್ಟಿನಲ್ಲಿ ಪ್ರತಿದಿನ ವಿಚಾರಣೆ, ತನಿಖೆಗೆಂದು ಬ್ರಹ್ಮಾವರ, ಕುಂದಾಪುರ, ಉಡುಪಿಗೆ ತಂದೆ ಹಾಗೂ ಪಾಲಕರು ಪ್ರತಿದಿನ ಬೆಳಗ್ಗೆ ಹೋದರೆ ರಾತ್ರಿ 10 ಗಂಟೆಯಾದರೂ ಮನೆಗೆ ಬರಲಾಗುತ್ತಿಲ್ಲ.
ಅದರಲ್ಲೂ ಹತ್ತಾರು ಕಿ.ಮೀ. ದೂರದ ಕುಗ್ರಾಮದಿಂದ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಪರಿತಪಿಸುವ ಪರಿಸ್ಥಿತಿ ಎಂಥವರ ಹೃದಯವನ್ನೂ ಕರಗಿಸುತ್ತದೆ. ದುಡಿಮೆ ಮಾಡದಿದ್ದರೆ ಬದುಕು ಸಾಗಿಸುವುದೇ ಕಷ್ಟವಾಗಿರುವಾಗ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾ ನ್ಯಾಯಕ್ಕಾಗಿ ಅಲೆದಾಡುವ ಪ್ರಸಂಗ ಪ್ರತಿಭಾವಂತರನ್ನು ಪಡೆದ ಕುಟುಂಬಕ್ಕೆ ಬಂದೊದಗಿದೆ.
ಕ್ರೀಡಾ ಸಂಸ್ಥೆಗಳ ದಿವ್ಯನಿರ್ಲಕ್ಷ é
ಮೂಲ ಸೌಕರ್ಯವಿಲ್ಲದ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಪೃಥ್ವಿ ಅವರ ಸಾಧನೆ ಶ್ಲಾಘನೀಯವಾದುದು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಬಳಿಕ ಕ್ರೀಡಾ ಕ್ಲಬ್‌ಗಳು ತಮ್ಮ ಸಂಸ್ಥೆಗೆ ಸೇರಿಕೊಳ್ಳುವ ಮೂಲಕ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದವೇ ಹೊರತು ಆಕೆಯ ಸಾವಿನ ಬಳಿಕ ಕನಿಷ್ಠ ಮನೆಗೆ ತೆರಳಿ ಹೆತ್ತವರಿಗೆ ಸಾಂತ್ವನ ಹೇಳುವ ಪ್ರಯತ್ನವನ್ನೂ ಈ ತನಕ ಮಾಡಿಲ್ಲ.
ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ತಾರೆಗೆ ಕ್ರೀಡಾ ಸಂಸ್ಥೆಗಳು ಇದಕ್ಕಿಂತ ದೊಡ್ಡ ಅವಮಾನ ಮಾಡಲು ಸಾಧ್ಯವಿಲ್ಲವೆನ್ನುವುದು ಪಾಲಕರ ನೋವಿನ ಮಾತು.
50ಕ್ಕೂ ಅಧಿಕ ಚಿನ್ನದ ಪದಕ, ನೂರಾರು ಪ್ರಶಸ್ತಿ ಪಡೆದಿರುವ ಪೃಥ್ವಿಯ ಶವವನ್ನು ದಹನ ಮಾಡುವ ಮುಂಚೆಯೇ ಕೆಲವು ಸಂಘ-ಸಂಸ್ಥೆಗಳು ಪತ್ರಿಕಾಗೋಷ್ಠಿ ನಡೆಸಿ ಆಕೆಯ ಸಾವಿನ ವಸ್ತುನಿಷ್ಠ ತನಿಖೆಗೆ ಆಗ್ರಹಿಸುವ ಮೂಲಕ ಗುರುತಿಸಿಕೊಂಡಿದ್ದವು. ಆದರೆ ಇವರ ಕುಟುಂಬದ ವಾಸ್ತವ ಪರಿಸ್ಥಿತಿಯ ಬಗ್ಗೆ ಗಮನಹರಿಸುವ ಗೋಜಿಗೆ ಹೋಗಿಲ್ಲ.
ಶಾಸಕರ ಔದಾರ್ಯ
ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುವ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮೃತಳ ಮನೆಗೆ ತೆರಳಿ ಸಾಂತ್ವನ ಹೇಳಿದ್ದು ವಸ್ತುನಿಷ್ಠ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಹೆತ್ತವರು ಹೇಳುವಂತೆ, 'ನಮ್ಮ ಮಗಳು ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುವ ಕನಸನ್ನು ಹೊಂದಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವಳ ಸಾವಿನ ಸುತ್ತ ಹಲವು ಅನುಮಾನಗಳಿದ್ದು, ಕಣ್ಣಾರೆ ನೋಡಿದ ಸಹಪಾಠಿ ಸಹ ಯಾವುದೇ ವಿಚಾರಗಳನ್ನು ಹೇಳುತ್ತಿಲ್ಲ. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಚೂಡಿದಾರದ ಗಂಟನ್ನು ಬಿಡಿಸಿದ್ದಾರೆ ಎನ್ನುತ್ತಾರೆ.
62 ಕೆ.ಜಿ. ಭಾರದ ವ್ಯಕ್ತಿ ನೇಣು ಬಿಗಿದುಕೊಂಡಾಗ ಬಟ್ಟೆಯನ್ನು ಕತ್ತರಿಸಬೇಕೇ ವಿನಹ ಅನ್ಯಮಾರ್ಗವಿಲ್ಲ. ನೇಣು ಬಿಗಿದುಕೊಂಡ ಫ್ಯಾನಿಗೂ ಸಹ ಯಾವುದೇ ರೀತಿ ಹಾನಿಯಾಗಿಲ್ಲ'.
ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ. ಮಗಳ ಸಾವಿನ ನ್ಯಾಯಕ್ಕಾಗಿ ಉಸಿರಿರುವ ತನಕ ಹೋರಾಡುತ್ತೇನೆ ಎನ್ನುತ್ತಾರೆ.
ಉತ್ತರ ಸಿಗದ ಪ್ರಶ್ನೆಗಳು
ಪೃಥ್ವಿ ಸಾವಿನ ಕುರಿತ ಹಲವು ಪ್ರಶ್ನೆಗಳು ಇನ್ನೂ ನಿಗೂಢವಾಗಿವೆ. ಅವುಗಳಿಗೆ ಉತ್ತರವನ್ನು ತನಿಖೆಯಿಂದಲೇ ತಿಳಿಯಬೇಕಾಗಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ ಆಗ್ರಹಿಸಿದ್ದಾರೆ.
*) ಮನೆಗೆ ಬರುತ್ತೇನೆಂದು ಹೇಳಿದ ಪೃಥ್ವಿ ಅರ್ಧ ಗಂಟೆಯ ಅಂತರದಲ್ಲಿ ನೇಣಿಗೆ ಶರಣಾದುದನ್ನು ಮೊದಲು ನೋಡಿದವರು ಯಾರು?
*) ಬಾಗಿಲು ಒಡೆದಿದೆ ಎಂದು ಕೆಲವರು ಹೇಳಿದರೆ ಅಡುಗೆಯವರು ನೋಡುವಾಗ ಬಾಗಿಲು ತೆರೆದಿದೆ ಎನ್ನುವುದಕ್ಕೆ ಸ್ಫಷ್ಟತೆಯಿಲ್ಲ.
*) ಆತ್ಮಹತ್ಯೆಯ ಬಗ್ಗೆ ಪೊಲೀಸರಿಗೆ ತಿಳಿಸದೆ ನೇರ ಆಸ್ಪತ್ರೆಗೆ ತಂದುದರ ಔಚಿತ್ಯವಾದರೂ ಏನು?
* ಬಹುತೇಕ ಆತ್ಮಹತ್ಯೆಯಾಗುವ ಸಂದರ್ಭ ಮಲ-ಮೂತ್ರ ವಿಸರ್ಜನೆಯಾಗುತ್ತದೆ. ಆದರೆ ಪೃಥ್ವಿ ಪ್ರಕರಣದಲ್ಲಿ ಹಾಗೇನೂ ಆಗಿಲ್ಲ ಮತ್ತು ಪೊಲೀಸರು ಆ ಸಂಧರ್ಭದಲ್ಲಿ ಯಾರನ್ನೂ ಹಾಸ್ಟೆಲ್ ಕಡೆಗೆ ಬಿಡುತ್ತಿರಲಿಲ್ಲ.
*) ಮಂಡ್ಯದಲ್ಲಿ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಬಸ್ಸಿನಲ್ಲಿ ನೃತ್ಯ ಮಾಡುತ್ತ ಸಹಪಾಠಿಗಳಿಗೆ ಸಿಹಿತಿಂಡಿ ವಿತರಿಸಿದ ಈಕೆ ಮನೆಯಲ್ಲಿದ್ದ ತಾಯಿ ಜತೆ ಫೋನ್‌ನಲ್ಲಿ ಮಾತನಾಡಿದ್ದಾಳೆ; ಇದರಿಂದ ಆತ್ಮಹತ್ಯೆ ಪೂರ್ವ ನಿರ್ಧರಿತವಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
*) ಪೃಥ್ವಿ ಆತ್ಮಹತ್ಯೆಯ ಕುರಿತು ಆಕೆಯ ತಂದೆಗೆ ಕರೆಮಾಡಿದ ಮೊಬೈಲ್ ಯಾರಿಗೆ ಸೇರಿದ್ದು ಎಂದು ತಿಳಿದಿಲ್ಲ. ಮತ್ತೆ ಆ ಸಂಖ್ಯೆಗೆ ಕರೆ ಮಾಡಿದರೆ ದರ್ಪದ ಮಾತುಗಳು ಉತ್ತರವಾಗಿದ್ದವು.
*) ದೈವ ಭಕ್ತೆಯಾದ ಪೃಥ್ವಿಯ ಕುತ್ತಿಯಲ್ಲಿ ಶಿಲುಬೆ ಬಂದದ್ದು ಹೇಗೆ?
*) ಪೃಥ್ವಿಯ ಡೈರಿಯಲ್ಲಿ ಪತ್ತೆಯಾದ 'ಯಾವ ಪಾಲಕರೂ ಸಹ ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಹಾಕಬಾರದು. ಚಿತ್ರಹಿಂಸೆ ನೀಡುತ್ತಾರೆ' ವಾಕ್ಯ ಆಕೆಗೆ ಅಲ್ಲಿ ಉಸಿರು ಕಟ್ಟಿಸುವ ವಾತಾವರಣ ನಿರ್ಮಿಸಿತ್ತೆ?
*) ಎಲ್ಲಾ ಪುಟಗಳಿದ್ದು ಮಹತ್ವದ 4 ಹಾಳೆಗಳನ್ನು ಹರಿದಿರಲು ಕಾರಣವೇನು, ಆ ಹಾಳೆಗಳು ಎಲ್ಲಿ ಹೋದವು? ಆಕೆಯಲ್ಲಿ ಮೊಬೈಲ್ ಇತ್ತು ಎನ್ನುವುದಾದಾದರೆ ಅದರಿಂದ ಸಂಪೂರ್ಣ ವಿವರಗಳನ್ನು ಪಡೆಯಲು ಸಾಧ್ಯವಿಲ್ಲವೆ? ಡೈರಿಯಲ್ಲಿ ಜತೆಗಾತಿ ದಿವ್ಯಾ ಸಹಿ ಹಾಕಲು ಕಾರಣವೇನು? ಹಸ್ತಾಕ್ಷರದ ಗೊಂದಲದ ಬಗ್ಗೆ ದಿವ್ಯಾಳ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು, ಸದಾ ಒಟ್ಟಿಗೆ ಇದ್ದರೂ ಸಹ ಗೆಳತಿಯ ಸಾವಿನಿಂದ ಯಾವುದೇ ರೀತಿಯಲ್ಲಿ ಹತಾಶಳಾಗದಿರುವ ನಡವಳಿಕೆಯ ಹಿನ್ನೆಲೆ ಏನು? ಆತ್ಮಹತ್ಯೆಯಾದ ಬಳಿಕ ಪ್ರಾಥಮಿಕ ಹಂತದಲ್ಲೆ ಸಂಶಯ ಬಂದಾಗ ಆರಕ್ಷಕರು ದೂರನ್ನು ಸ್ವೀಕರಿಸಲು ಮೀನಮೇಷ ಎಣಿಸಿದ್ದು ಯಾಕೆ?

No comments:
Post a Comment